ಋಷಿ
	
ದಿವ್ಯ ಜ್ಞಾನವನ್ನು ಪಡೆದ ಕವಿ; ಅಲೌಕಿಕ ದರ್ಶನ ಪಡೆದ ಮಹಾ ಪುರುಷ. ದಿವ್ಯಮಂತ್ರಗಳನ್ನು ಹಾಡುವವ. ಉದಾ-ಕುತ್ಸ, ವಸಿಷ್ಠ, ಅತ್ರಿ, ಅಗಸ್ತ್ಯ ಇತ್ಯಾದಿ. ಋಷಿಗಳು ದೇವಮಾನವ ಅಸುರ ವರ್ಗದಿಂದ ಭಿನ್ನರು. ವೇದಾದಿ ಪವಿತ್ರ ಗ್ರಂಥಗಳನ್ನು ಬರೆದವರು ಅಥವಾ ದೇವವಾಣಿಯಿಂದ ಅರಿತವರು. ಆದ್ದರಿಂದ ಇವರನ್ನು ಮಂತ್ರದ್ರಷ್ಟಾರರೆನ್ನಲಾಗಿದೆ. ವೇದದ ಪ್ರತಿ ಸೂಕ್ತದಲ್ಲೂ ದೇವತೆ, ಛಂದಸ್ಸು ಮತ್ತು ವಿನಿಯೋಗಗಳೊಂದಿಗೆ ಕರ್ತೃವಾದ ಋಷಿಯ ಹೆಸರನ್ನೂ ಹೇಳಿದೆ. ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ- ಇವರು ಗೋತ್ರ ಋಷಿಗಳು. ಮರೀಚಿ, ಅತ್ರಿ, ಅಂಗಿರಸ್, ಪುಲಸ್ತ್ಯ, ಪುಲಹ, ಕ್ರತು, ವಸಿಷ್ಠ- ಇವರು ಸಪ್ತರ್ಷಿ ಮಂಡಲದ ಏಳು ನಕ್ಷತ್ರರೂಪಿ ಋಷಿಗಳು. ಇವರೊಂದಿಗೆ ಮನು ಇನ್ನೂ ಮೂರು ಹೆಸರುಗಳನ್ನು (ಪ್ರೆಚೇತಸ, ಭೃಗು, ನಾರದ) ಸೇರಿಸಿ ಹತ್ತು ಮಂದಿಯನ್ನು ಪ್ರಜಾಪತಿಗಳು ಎಂದು ಹೆಸರಿಸಿದ್ದಾನೆ. ಋಷಿಗಳಲ್ಲಿ ದೇವರ್ಷಿ, ಬ್ರಹ್ಮರ್ಷಿ, ರಾಜರ್ಷಿ, ಮಹರ್ಷಿ, ಪರಮರ್ಷಿ, ಶ್ರುತರ್ಷಿ, ಕಾಂಡರ್ಷಿ ಎಂಬ ವೈವಿಧ್ಯವಿದೆ.							
  
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ